ಕಾಮಶಾಸ್ತ್ರ

 ಭರತಖಂಡದಲ್ಲಿ ಅರ್ಥಶಾಸ್ತ್ರದ ಸಂಗಡ ಕಾಮಶಾಸ್ತ್ರವೂ ಪ್ರಗತಿಗೆ ಬಂತು ಧರ್ಮ, ಅರ್ಥ, ಕಾಮ ಎಂಬ ಮೂರು ಪುರುಷಾರ್ಥಗಳಲ್ಲಿ ಕಡೆಯ ಎರಡೇ ನಿಜವಾಗಿಯೂ ಶುದ್ಧಲೌಕಿಕ ಅಥವಾ ವ್ಯಾವಹಾರಿಕ ಸ್ವರೂಪವನ್ನು ಪಡೆದಿದೆ. ಯಾವರೀತಿ ಅರ್ಥವನ್ನು ದೊರಕಿಸಲು ಯುಕ್ತಸಾಧನಗಳ ನಿರ್ದೇಶ, ಮತ್ತು ಅರ್ಥರಕ್ಷಣೆಗೆ ಅಗತ್ಯವಾದ ಸಂಗತಿಗಳ ನಿರೂಪಣೆ ಅರ್ಥಶಾಸ್ತ್ರದ ವಿಷಯವೋ ಅದೇ ರೀತಿ ಕಾಮದ ಸಂತೃಪ್ತಿಗೆ ಯುಕ್ತಸಾಧನ ಅಥವಾ ಮುಖ್ಯವಾಗಿ ಆಳುವ ರಾಜಾದಿಗಳನ್ನು ಕುರಿತು ಹೊರಟಿದೆಯೋ ಹಾಗೆಯೇ ಕಾಮಶಾಸ್ತ್ರ ಮುಖ್ಯವಾಗಿ ಕಾಮಕಲಾಸಕ್ತರಾದ ನಾಗರಕರನ್ನು (ರಸಿಕರನ್ನು) ಕುರಿತು ಹೊರಟಿದೆ. ಸ್ತ್ರೀಯರ ಮತ್ತು ನಗರದಲ್ಲಿಯ ರಸಿಕರ ಸಂಬಂಧ ಹೇಗೆ ಹೇಗೆ ಇರಲು ಶಕ್ಯವೆಂಬುದನ್ನು ಈ ಶಾಸ್ತ್ರ ವಿವೇಚಿಸುತ್ತದೆ. ಈ ಎರಡೂ ಶಾಸ್ತ್ರಗಳ ಗ್ರಂಥ ನಿರೂಪಣಾಶೈಲಿಯಲ್ಲಿ ತುಂಬ ಸಾಮ್ಯವಿದೆ. ಕಾಮಕಲೆಯನ್ನು ಕುರಿತ ಗ್ರಂಥಗಳಲ್ಲಿ ವಿಶ್ವದಲ್ಲೇ ಪ್ರಥಮ ಕೃತಿಯಾಗಿದೆ-ಮಲ್ಲನಾಗ ವಾತ್ಸ್ಯಾಯನನ ಕಾಮಸೂತ್ರ. ಅದರ ಶೈಲಿಗೂ ಕೌಟಿಲ್ಯನ ಅರ್ಥಶಾಸ್ತ್ರದ ಶೈಲಿಗೂ ಅತ್ಯಂತ ಸಾಮ್ಯವಿದೆ. ಕೌಟಿಲ್ಯನ ಮಾದರಿಯನ್ನೇ ವಾತ್ಸ್ಯಾಯನ ಅನುಸರಿಸಿದಂತಿದೆ. ಭಾಷ್ಯದಂತಿರುವ ಸೂತ್ರವಾಕ್ಯಗಳು ಅಧ್ಯಾಯದ ಕಡೆಗೂ ಕೆಲವು ಶ್ಲೋಕಗಳು ಬರುತ್ತವೆ. ಅರ್ಥಶಾಸ್ತ್ರದಂತೆಯೆ ಕಾಮಸೂತ್ರದಲ್ಲಿಯೂ ಆರಂಭದಲ್ಲಿ ವಿಷಯಾನುಕ್ರಮಣಿಕೆ, ತ್ರಿವರ್ಗಗಳ ವಿವೇಚನೆ, ವಿದ್ಯಾಸಮುದ್ದೇಶಗಳು ಬರುತ್ತದೆ. ಅರ್ಥಶಾಸ್ತ್ರ ಕಾಮಶಾಸ್ತ್ರಗಳೆರಡರಲ್ಲಿಯೂ ಧರ್ಮದ ಮಹತ್ತ್ವವನ್ನು ಮುಕ್ತಕಂಠದಿಂದ ಮಾನ್ಯಮಾಡಲಾಗಿದೆ. ಧರ್ಮಶಾಸ್ತ್ರದ ಪ್ರಕಾರ ಪುಣ್ಯ ಪಾಪಗಳನ್ನು ಒಪ್ಪಿ ಅವುಗಳಿಗೆ ಅವಿರುದ್ದವಾದ ಅರ್ಥ ಕಾಮಗಳನ್ನು ಈ ಲೌಕಕಿ ಶಾಸ್ತ್ರಗಳು ವಿವೇಚಿಸುತ್ತದೆ. ಪರಸ್ತ್ರೀವಶೀಕರಣ, ಸಂಗ್ರಹಣ ಮುಂತಾದ ವಿಷಯಗಳನ್ನು ವಾತ್ಸ್ಯಾಯನ ನಿರೂಪಿಸುವುದು ಕೇವಲ ಶಾಸ್ತ್ರದ ಪೂರ್ಣತಾದೃಷ್ಟಿಯಿಂದ, ಅರ್ಥಶಾಸ್ತ್ರದಲ್ಲಿ ಕೌಟಿಲ್ಯ ಶತ್ರುವಿಜಯಕ್ಕೆ ಮೋಸದ ವಿಧಾನಗಳನ್ನೂ ಹೇಳಿರುವಂತೆ. ಇಷ್ಟರಿಂದಲೇ ಈ ಶಾಸ್ತ್ರ ಅನೀತಿಯನ್ನು ಉಪದೇಶಿಸುವುದಕ್ಕಾಗಿ ಹೊರಟಿದೆಯೆಂದು ತೀರ್ಮಾನಿಸಲು ಬಾರದು. ಒಂದರ್ಥದಲ್ಲಿ ವಾತ್ಸ್ಯಾಯನ ಪ್ರೇಮಾರಾಜ್ಯದ ಕೌಟಿಲ್ಯನೆಂದರೂ ಸಲ್ಲುತ್ತದೆ.

 ಕಾಮಶಾಸ್ತ್ರದ ಬಹಳಷ್ಟು ವಿಷಯಗಳು ಆಧುನಿಕ ಅಭಿರುಚಿಗೆ ಅಶ್ಲೀಲವೆಂದು ತೋರಬಹುದು ಏಕೆಂದರೆ ಪ್ರಾಚೀನ ಭಾರತೀಯರು ಸ್ವಲ್ಪವೂ ಮುಚ್ಚು ಮರೆಯಿಲ್ಲದೆ ಗೋಪ್ಯಸಂಗತಿಗಳನ್ನೆಲ್ಲ ವರ್ಣನೆಮಾಡಿದ್ದಾರೆ. ಆದರೂ ವಾತ್ಸ್ಯಾಯನನೇ ಗ್ರಂಥವಾಕ್ಯದಲ್ಲಿ ತನ್ನ ಗ್ರಂಥದ ಉದ್ದೇಶ ಧರ್ಮವಿರೋಧವಲ್ಲವೆಂದೂ ಕಾಮಪ್ರಚೋದನೆಗೆ ತನ್ನ ಗ್ರಂಥ ಕಾರಕವಲ್ಲವೆಂದೂ ಸಾರಿಹೇಳಿದ್ದಾನೆ. ಈ ಕಾರಣದಿಂದಲೇ ಭಾರತೀಯ ಕಾಮಶಾಸ್ತ್ರ ಲ್ಯಾಟಿನ್ ಮುಂತಾದ ಇರತ ಭಾಷೆಗಳಲ್ಲಿರುವ ಓವಿಡನ ಕಾಮಕಲಾಗ್ರಂತ ಮುಂತಾದುವುಗಳಿಂದ ಭಿನ್ನವೆನ್ನಬೇಕಾಗಿದೆ. ಭಾರತೀಯ ಸಮಾಜಶಾಸ್ತ್ರ ಅಧ್ಯಯನಕ್ಕೆ ಅಲ್ಲಿ ಎಷ್ಟೋ ಮನನೀಯ ಅಂಶಗಳು ದೊರೆಯುತ್ತವೆ.

 ಕಾಮಶಾಸ್ತ್ರದಲ್ಲಿ ಉಪಲಬ್ಧವಾಗಿರುವ ಗ್ರಂಥಗಳಲ್ಲೆಲ್ಲ ವಾತ್ಸ್ಯಾಯನನ ಕಾಮಸೂತ್ರವೇ ಪ್ರಾಚೀನವಾದರೂ ಅದೇ ಮೊದಲ ಕೃತಿಯನ್ನುವಂತಿಲ್ಲ. ಪ್ರಸ್ತಾವನೆಯಲ್ಲಿ ಆತ ಈ ಬಗ್ಗೆ ಹೇಳದ್ದಾನೆ. ಔದ್ಧಾಲಕಿ ಶ್ವೇತಕೇತು ಪ್ರರಾತನ ಗ್ರಂಥವನ್ನು ಬರೆದ. ಅದರ ಮೇಲೆ ಪಾಂಚಾಲ ಬಾಭ್ರವ್ಯನ ಟೀಕೆ ಬಂತು. ಅದರಲ್ಲಿ ಏಳು ವಿಭಾಗಗಳಿದ್ದವು. ಆರನೆಯ ವಿಭಾಗವಾಗಿದ್ದ ವೈಶಿಕ (ವೇಶ್ಯೇಯರಿಗೆ ಸಂಬಂಧಿಸಿದ) ಪ್ರಕರಣವನ್ನು ಪಾಟಲೀಪುತ್ರದ ದತ್ತಕ ವಿಸ್ತರಿಸಿದ, ಮಿಕ್ಕ ಪ್ರಕರಣಗಳ ಮೇಲೆ ಚಾರಾಯಣ, ಸುವರ್ಣನಾಭ ಘೋಟಕಮುಖ, ಗೋನರ್ದೀಯ, ಗೋಣಿಕಾಪುತ್ರ ಕುಚಮಾರ ಎಂಬ ಪಂಡಿತರು ಭಾಷ್ಯಗಳನ್ನು ಬರೆದರು. ಹೀಗೆ ಶಾಸ್ತ್ರ ಖಂಡಖಂಡವಾಗಿದ್ದರೆ ಎಲ್ಲರಿಗೂ ಉಪಕಾರವಾಗದೆಂದು ಭಾವಿಸಿ ಸರ್ವಾಂಗಸುಂದರವಾದ ತನ್ನ ಕೃತಿಯನ್ನು ವಾತ್ಸ್ಯಾಯನ ಬರೆದನಂತೆ. ಇವರೆಲ್ಲರೂ ಕಾಲ್ಪನಿಕ ವ್ಯಕ್ತಿಗಳೆಂಬಂತಿಲ್ಲ. ಏಕೆಂದರೆ ಇವರ ವಚನಗಳನ್ನು ಮುಂದಿನ ಗ್ರಂಥಕಾರರು ಅನೇಕವೇಳೆ ಉದಾಹರಿಸುತ್ತಾರೆ.

 ರಾಜಾಸ್ಥಾನಗಳಲ್ಲಿ ಖ್ಯಾತಿಗೆ ಬರುತ್ತಿದ್ದ ಕಾವ್ಯಪರಂಪರೆಗೂ ಅರ್ಥಶಾಸ್ತ್ರ ಕಾಮಶಾಸ್ತ್ರಗಳಿಗೂ ತುಂಬ ನಿಕಟವಾದ ಸಂಬಂಧವಿದೆ. ಪ್ರೌಢ ಕವಿಯಾಗತಕ್ಕವ ಕಾಮ ಶಾಸ್ತ್ರವನ್ನು ಅಭ್ಯಾಸಮಾಡಿರಬೇಕೆಂಬ ಅಲಂಕಾರಶಾಸ್ತ್ರಕಾರರು ಹೇಳಿದ್ದಾರೆ. ಹಾಗೆಯೇ ಕಾಳಿದಾಸ, ಶ್ರೀಹರ್ಷ ಮಯೂರ, ದಂಡಿ ಮಾಘ, ಭವಭೂತಿ ಮುಂತಾದ ಮಹಾಕವಿಗಳೆಲ್ಲ ಕಾಮಶಾಸ್ತ್ರವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದವರೆಂದು ಹೇಳಲು ಆಂತರಿಕ ಪ್ರಮಾಣಗಳು ಸಿಕ್ಕುತ್ತವೆ. ಆದ್ದರಿಂದ ವಾತ್ಸ್ಯಾಯನ ಕ್ರಿ.ಶ. ನಾಲ್ಕನೆಯ ಶತಮಾನದವನಿರಬಹುದೆಂದು ತೋರುತ್ತದೆ. ಅಂದರೆ ಕೌಟಿಲ್ಯನ ಅನಂತರ ಮತ್ತು ಕಾಳಿದಾಸನಿಗೆ ಹಿಂದೆ ಈತ ಇದ್ದಿರಬಹುದು. ಆದರೆ ಇದು ಊಹೆ ಮಾತ್ರ. ವರಾಹಮಿಹಿರನ ಜ್ಯೋತಿಷಗ್ರಂಥದಲ್ಲಿಯಾ (ಕ್ರಿ.ಶ 6ನೆಯ ಶತಮಾನ) ಕೆಲವು ಕಾಮಶಾಸ್ತ್ರ ವಿಷಯಗಳು ದೊರೆಯುತ್ತವೆ.

 ವಾತ್ಸ್ಯಾಯನನ ಕಾಮಸೂತ್ರ : ಈ ಗ್ರಂಥದಲ್ಲಿ ಏಳು ಅಧಿಕರಣಗಳಿವೆ. ಅಧಿಕರಣದ ವಿಭಾಗಗಳಿಗೆ ಅಧ್ಯಾಯಗಳೆಂದು ಹೆಸರು. ಒಟ್ಟು 64 ವಿಷಯಗಳನ್ನುಒಂದೊಂದು ಪ್ರಕರಣದಲ್ಲೂ ವಿವರಿಸಲಾಗಿದೆ.

 ಮೊದಲು ವಿಷಯಾನುಕ್ರಮಣಿಕೆ ಬರುತ್ತದೆ. ಅನಂತರ ಪುರುಷಾರ್ಥಗಳ ಸಾಮಾನ್ಯ ನಿರೂಪಣೆ ಆಮೇಲೆ ಕಾಮಪುರುಷಾರ್ಥದ ಮಹತ್ತ್ವ, ಮುಂದೆ ಈ ಶಾಸ್ತ್ರಾಧ್ಯಯನಕ್ಕೆ ಯೋಗ್ಯ ಅಧಿಕಾರಿ ಯಾರೆಂಬ ವಿಷಯ, ಸ್ತ್ರೀಯರಿಗೆ ಇದರ ಅಗತ್ಯ-ಇತ್ಯಾದಿ ವಿಷಯಗಳು ಬಂದಿವೆ. ರಸಿಕನಾದ ನಾಗರಕನ ಲಕ್ಷಣಗಳಾವುವು, ಅವನ ದೈನಂದಿನ ವೇಷ ಭಾಷೆ ಭೂಷಣಾದಿಗಳು ಹೇಗಿರಬೇಕು. ಅವನ ಸಂಗಡಿಗರು ಎಂಥವರಿರಬೇಕು, ಎಂಥ ದೂತಿಯರನ್ನು ಆತ ನೇಮಿಸಿಕೊಳ್ಳಬೇಕು-ಈ ವಿಚಾರಗಳು ಮೊದಲ ಅಧಿಕರಣದ ವಿಷಯವೆನ್ನಬಹುದು.

 ಎರಡನೆಯ ಅಧಿಕರಣಕ್ಕೆ ಸಾಂಪ್ರಯೋಗಿಕ ಎಂದು ಹೆಸರು. ಇಲ್ಲಿ ಸಂಭೋಗ ಪ್ರಯೋಗಗಳ ವಿವಿಧ ಪ್ರಕಾರಗಳ ನಿರ್ದೇಶನವಿದೆ. ಸಮಾನ ಸ್ತ್ರಿಪುರುಷರಲ್ಲಿ ಶಕ್ಯವಾದ ಸಮರತಿ. ವೀರ್ಯಸ್ಖಲನ ಸ್ತ್ರೀ-ಪುರುಷರಿಬ್ಬರಿಗೂ ಸಮಕಾಲದಲ್ಲಿ ಹೇಗೆ ಶಕ್ಯ; ಇದಕ್ಕೆ ಅಗತ್ಯವಾದ ಪ್ರೀತಿವಿಶೇಷಕ್ಕೆ ಸಾಧಕಾಂಗಗಳಾದ ಚುಂಬನ, ಆಲಿಂಗನ, ನಖಕ್ಷತ, ದಂತಕ್ಷತ ಮುಂತಾದವುಗಳ ನಾನಾ ಪ್ರಾದೇಶಿಕ ಪ್ರಕಾರಗಳು; ಪುರುಷಾಯಿತ; ನಾನಾ ಜಾತಿಯ ಹಕ್ಕಿ ಮತ್ತು ಮೃಗಗಳಂತೆ ಚಿತ್ರವಿಚಿತ್ರ ರತಿಬಂಧಗಳು- ಇವೆಲ್ಲ ಎರಡನೆಯ ಅಧಿಕರಣದ ವಿಷಯ. ಖಜುರಾಹೋ ಮುಂತಾದ ದೇವಾಲಯಗಳಲ್ಲಿ ಈ ಚಿತ್ರ ಬಂಧಗಳನ್ನು ಶಾಸ್ತ್ರಕ್ಕೆ ಉದಾಹರಣೆಯಾಗಬೇಕೆಂದೇ ರಚಿಸಿದ ಶಿಲ್ಪಮಿಥುನಗಳನ್ನು ಇಂದಿಗೂ ನೋಡಬಹುದು.

 ಮೂರನೆಯದು ಕನ್ಯಾಸಂಪ್ರಯುಕ್ತಕ ಎಂಬ ಅಧಿಕರಣ. ಇಲ್ಲಿ ಜನ್ಮ ನಕ್ಷತ್ರ ಹಾಗೂ ಅಂಗಾಂಗ ಲಕ್ಷಣಗಳ ದೃಷ್ಟಿಯಿಂದ ವಿವಾಹಕ್ಕೆ ಯೋಗ್ಯಳಾದ ಕನ್ಯೆ ಹೇಗಿರಬೇಕು, ಹೀಗಿದ್ದರೆ ಶುಭ, ಹೇಗಿದ್ದರೆ ಅಶುಭವೆಂಬುದನ್ನು ವಿವರವಾಗಿ ತಿಳಿಸಿದೆ. ಅಶ್ವಲಾಯನ ಧರ್ಮಸೂತ್ರದಲ್ಲಿ ಹೇಳಿರುವ ದೈವೀ ಪರೀಕ್ಷೆ ಕೂಡ ಇಲ್ಲಿ ಉಲ್ಲೇಖಿಸಲ್ಪಟ್ಟಿದೆ. ವಿವಾಹಕ್ಕೆ ವಿಘ್ನಗಳೆಂಥವು, ಅವನ್ನು ಪರಿಹರಿಸುವ ಮಾರ್ಗಗಳು ಯಾವುವು; ವಿವಾಹಾನಂತರ ತರುಣ ತರುಣಿಯೊಂದಿಗೆ ಹೇಗೆ ವ್ಯವಹರಿಸಬೇಕು, ಪರಸ್ಪರ ವೈರವನ್ನು ಹೇಗೆ ದೂರೀಕರಿಸಬೇಕು-ಇವೇ ಮುಂತಾದ ವಿಚಾರಗಳನ್ನು ಇಲ್ಲಿ ವಿವರವಾಗಿ ಉಪಪಾದಿಸಿರುವುದರಿಂದ ಅಧಿಕರಣದ ಹೆಸರು ಸಮಂಜಸವಾಗಿದೆ.

 ನಾಲ್ಕನೆಯದು ಭಾರ್ಯಾಧಿಕರಣ. ಸಂಗಮಯೋಗ್ಯೆಯರಾದ ನಾಯಿಕೆಯರಲ್ಲಿ ಹೆಂಡತಿ, ಇಟ್ಟುಕೊಂಡವಳು, ವೇಶ್ಯೆ ಎಂಬ ಮೂರು ಬಗೆಗಳನ್ನು ತಿಳಿಸಲಾಗಿದೆಯಲ್ಲದೆ ಇವರನ್ನು ಮನೆಯಲ್ಲಿ ಸಂಭಾಳಿಸುವ ವಿವರಗಳಿವೆ. ಗೃಹಿಣಿಗೆ ಒಪ್ಪಿಸಬೇಕಾದ ಕೆಲಸಗಳು, ಆಕೆಯ ಗೃಹಕೃತ್ಯದ ದಕ್ಷತೆಯ ಪ್ರಕಾರ, ಸವತಿಯೊಡನೆ ಇರಬೇಕಾದ ರೀತಿ, ಅಸಭ್ಯಸ್ತ್ರೀಯರ ವರ್ತನೆ, ಅನೇಕ ಸ್ತ್ರೀಯರೊಡನೆ ಇರುವ ಪುರುಷನಲ್ಲಿರಬೇಕಾದ ದಾಕ್ಷಿಣ್ಯ- ಇತ್ಯಾದಿ ವಿವರಗಳಿಲ್ಲಿವೆ. ಕಾಳಿದಾಸನ ಶಾಕುಂತಲದಲ್ಲಿ ಕಣ್ವರು ಶಕುಂತಲೆಗೆ ಮಾಡುವ ಉಪದೇಶ ವಾಕ್ಯಗಳು ಈ ಅಧಿಕರಣದ ವಾಕ್ಯಗಳಿಂದಲೇ ಪ್ರಭಾವಿತವಾಗಿವೆ.    

 ಐದನೆಯದು ಪರಿಹಾರಕ ಎಂದರೆ ಪರರ ಹೆಂಡಿರನ್ನು ಒಲಿಸಿಕೊಳ್ಳುವ ವಿವರಗಳಿಗೆ ಮೀಸಲಾದ ವಿಭಾಗ. ಚಂಚಲ ಸ್ತ್ರೀಯರ ಹೆಗ್ಗುರುತುಗಳು, ಇತ್ಯಾದಿಗಳನ್ನರಿತವರು ಸ್ವಸ್ತ್ರೀಯರನ್ನು ದುರ್ನಡತೆಗಿಳಿಯದಂತೆ ರಕ್ಷಿಸಬಹುದೆಂದು ವಾತ್ಸ್ಯಾಯನ ಹೇಳಿದ್ದಾನೆ. ಇದೇ ಇದರ ಮೂಲ ಉದ್ದೇಶ ಪರಸ್ತ್ರೀಗಮನವನ್ನು ಪ್ರೋತ್ಸಾಹಿಸುವುದಲ್ಲ. ಸುಲಭಸಾಧ್ಯ ಮತ್ತು ಕಷ್ಟಸಾಧ್ಯವಾದ ಸ್ತ್ರೀಯರ ಲಕ್ಷ್ಷಣಗಳನ್ನು ಇಲ್ಲಿ ಹೇಳಲಾಗಿದೆ. ಸ್ತ್ರೀ ಪುರುಷರ ಗುಣಶೀಲಗಳ ವಿವೇಚನೆ, ಪ್ರವೃತ್ತಿಗೂ ಕಾರಣ ನಿರೂಪಣೆ, ಪರಿಚಯ ಬೆಳೆಸುವ ಉಪಾಯಗಳು, ಭಾವಪರೀಕ್ಷೆ, ಅಂತಃಪುರಸ್ತ್ರೀಯರ ರಕ್ಷಣೆ- ಮುಂತಾದ ವಿಷಯಗಳು ಈ ಅಧಿಕರಣದಲ್ಲಿ ಬರುತ್ತವೆ, 

 ಆರನೆಯದು ವೈಶಿಕ ಎಂದರೆ ವೇಶ್ಯೆಯರನ್ನು ಕುರಿತ ಅಧಿಕರಣ. ವೇಶ್ಯೆಯರನ್ನು ಒಲಿಸಿಕೊಳ್ಳುವ ಸಾಧನಗಳು, ವೇಶ್ಯೆಯರಿಗೆ ಅಗತ್ಯರಾದ ದೂತಿ, ಕುಂಟಣಿ ಮುಂತಾದವರು, ಅಗಮ್ಯರಾದವರು, ಕುಷ್ಠ ಮುಂತಾದ ರೋಗವುಳ್ಳವರು ಇತ್ಯಾದಿ-ನಾಯಕ ನಾಯಿಕೆಯರ ಗುಣವಿವೇಚನೆ, ದ್ರವ್ಯ ದೊರಕಿಸುವ ಪ್ರಣಾಲಿಗಳು, ವಿರಕ್ತ ಪುರುಷರ ಚಿಹ್ನೆಗಳು, ವಿರಕ್ತರನ್ನು ಅನುರಕ್ತರನ್ನಾಗಿ ಮಾಡುವ ವಿಧಾನಗಳು, ದ್ರವ್ಯಹೀನ ನಾಯಕರನ್ನು ಓಡಿಸು ಪರಿಗಳು- ಇತ್ಯಾದಿಗಳೇ ಈ ಅಧಿಕರಣದ ವಿಷಯಗಳಾಗಿವೆ.

 ಕಡೆಯದಾದ ಏಳನೆಯ ಅಧಿಕರಣಕ್ಕೆ ಔಪನಿಷದಕ ಅಥವ ರಹಸ್ಯಗಳ ಪ್ರಕಟಣೆ ಎಂಬ ಹೆಸರಿದೆ. ವಶೀಕರಣ, ಲಿಂಗವೃದ್ಧಿ, ಯೋನಿಸಂಕೋಚಗಳಿಗೆ ಉಪಯುಕ್ತವಾದ ಮಣಿಮಂತ್ರೌಷಧಗಳು ಇಲ್ಲಿ ಉಕ್ತವಾಗಿವೆ. 

 ಏಳು ಅಧಿಕರಣಗಳ ಈ ಕಾಮಸೂತ್ರ ಗ್ರಂಥಕ್ಕೆ ಜಯಮಂಗಲಾ ಎಂಬ ವ್ಯಾಖ್ಯೆ ಉಪಲಬ್ಧವಿದೆ. ಇದನ್ನು ರಚಿಸಿದ ಯಶೋಧರ ಕ್ರಿ. ಶ. ಹದಿಮೂರನೆಯ ಶತಮಾನದಲ್ಲಿದ್ದ ವೀಸಲದೇವನ (1243-1261) ಆಸ್ಥಾನ ಕವಿ. ಈ ಟೀಕೆ ವಿಸ್ತಾರವಾಗಿದ್ದು, ವಾತ್ಸ್ಯಾಯನನ ಅನಂತರ ರಚಿತವಾದ ಕಾಮಶಾಸ್ತ್ರ ಗ್ರಂಥಗಳಿಂದಲೂ ಬೇಕಾದಂತೆ ಅವತರಣಿಕೆಗಳನ್ನು ಉದಾಹರಿಸುತ್ತದೆ. 17ನೆಯ ಶತಮಾನದಲ್ಲಿ ವೀರಸಿಂಹದೇವನೆಂಬ ಅರಸ ರಚಿಸಿರುವ ಪದ್ಯಮಯ ವ್ಯಾಖ್ಯಾನಕ್ಕೆ ಕಂದರ್ಪ ಚೂಡಾಮಣಿಯೆಂದು ಹೆಸರಿದೆ. 1788ರಲ್ಲಿ ಕಾಶಿಯ ಪಂಡಿತನಾದ ಭಾಸ್ಕರ ನರಸಿಂಹ ಬರೆದ ಟೀಕೆ ಇನ್ನೂ ಅಚ್ಚಾಗಿಲ್ಲ.

 ವಾತ್ಸ್ಯಾಯನನ ಅನಂತರದ ಗ್ರಂಥಗಳು: ವಾತ್ಸ್ಯಾಯನನ ಗ್ರ್ರಂಥ ಮುಖ್ಯವಾಗಿ ಶಾಸ್ತ್ರಸರಣಿಯಲ್ಲಿದ್ದರೆ ಅನಂತರದ ಗ್ರಂಥಗಳೆಲ್ಲಾ ಸುರತಕ್ರೀಡೆಯನ್ನು ಕಲೆಯೆಂದು ಪರಿಗಣಿಸಿ ಕಾವ್ಯಮಯ ಪದ್ಯಶೈಲಿಯಲ್ಲಿ ವರ್ಣಿಸುವ ಗ್ರಂಥಗಳಾಗಿವೆ. ಇವುಗಳಲ್ಲೆಲ್ಲ ಸಾಹಿತ್ಯಕೌಶಲವೂ ಛಂದೋವೈಚಿತ್ರ್ಯವೂ ಮೋಹಕವಾಗಿರುತ್ತವೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಗ್ರಂಥಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು.

 1 ಪದಶ್ರೀ ಎಂಬಾತ ಬರೆದ ನಾಗರಸರ್ವಸ್ವ. ಈ ಗ್ರಂಥಕಾರ ಬೌದ್ಧನಾಗಿದ್ದು ದಾಮೋದರಗುಪ್ತ ರಚಿಸಿದ ಕುಟ್ಟಿನೀಮತವನ್ನುಉಲ್ಲೇಖಿಸಿದ್ದಾನೆ. ಇವನ ಕಾಲ 10ನೆಯ ಶತಮಾನದ ಅಂತ್ಯವೆನ್ನಬಹುದು.

 2 ಕಲ್ಯಾಣಮಲ್ಲನ ಅನಂಗರಂಗ. ಅಯೋಧ್ಯೆಯ ನವಾಬನ ಮನೋರಂಜನೆಗಾಗಿ ಬರೆದ ಈ ಗ್ರಂಥ ಅತ್ಯಂತ ಜನಪ್ರಿಯವಾಗಿದೆ. ಕಾಲ 16ನೆಯ ಶತಮಾನ.

 3 ಕೊಕ್ಕೋಕ ಕವಿಯ ರತಿರಹಸ್ಯ. ಕವಿ ಸಿಂಹಳದೇಶದವನೆಂಬ ಐತಿಹ್ಯವಿದೆ. ಕಾಲ ಸುಮಾರು 13ನೆಯ ಶತಮಾನ. ಲೋಕ ಪ್ರಸಿದ್ಧಿಯ ಮೂಲಕ ಇವನ ಕಾಮಶಾಸ್ತ್ರಕ್ಕೆ ಕೊಕ್ಕೋಕಶಾಸ್ತ್ರವೆಂಬ ನಾಮಾಂತರ ಜನಜನಿತವಾಗಿದೆ. ಈ ಗ್ರಂಥ ಭಾರತೀಯ ಭಾಷೆಗಳಲ್ಲಿಯೂ ಐರೋಪ್ಯ ಭಾಷೆಗಳಲ್ಲಿಯೂ ಅನೇಕ ಅನುವಾದಗಳನ್ನು ಕಂಡು ತುಂಬ ಜನಪ್ರಿಯತೆಯನ್ನು ಗಳಿಸಿದೆ. ಈತ ತನ್ನ ಗ್ರಂಥದಲ್ಲಿ ವಾತ್ಸ್ಯಾಯನನ ಸಿದ್ಧಾಂತವನ್ನಷ್ಟೇ ಅಲ್ಲದೆ ನಂದಿಕೇಶ್ವರ, ಗೋಣಿಕಾಪುತ್ರರ ಸಿದ್ಧಾಂತಗಳನ್ನು ಸಂಗ್ರಹಿಸಿರುವುದಾಗಿ ಹೇಳುತ್ತಾನೆ. ಈ ಗ್ರಂಥವನ್ನು ಗೀತ ಗೋವಿಂದ ಕಾವ್ಯಕ್ಕೆ ವ್ಯಾಖ್ಯಾನ ಬರೆದಿರುವ ರಾಣಾ ಕುಂಭಕರ್ಣ ಮೇಲಿಂದ ಮೇಲೆ ಉದಾಹರಿಸಿದ್ದಾನೆ.

 4 ಕವಿಶೇಖರಜ್ಯೋತಿರೀಶ್ವರನ ಪಂಚಸಾಯಕ.ಇದಾದರೂ ತುಂಬಾ ಖ್ಯಾತಿಯನ್ನು ಗಳಿಸಿದೆ. ಇಲ್ಲಿಯೂ ಗೋಣಿಕಾಪುತ್ರ, ನಂದೀಶ್ವರ, ಮೂಲದೇವ, ರತಿದೇವ ಮುಂತಾದ ಪೂರ್ವಲೇಖಕರ ಪ್ರಸ್ಥಾಪವಿದೆ.

ಇವಲ್ಲದೆ ಹೆಚ್ಚು ಮುದ್ರಣಪ್ರಸಾರವಿಲ್ಲದ ಮತ್ತೆ ಕೆಲವು ಗ್ರಂಥಗಳಿವು: ಹರಿಹರನ ರತಿರಹಸ್ಯ ಅಥವ ಶೃಂಗಾರದೀಪಿಕೆ. ವಿಜಯನಗರದ ರಾಜ ಇಮ್ಮಡಿ ಪ್ರೌಢದೇವರಾಯನ(1422-48)ರತಿರತ್ನಪ್ರದೀಪಿಕೆ. ತಂಜಾವೂರು ರಾಜ ಶಾಹಜಿ(1684-1710) ಬರೆದಿರುವ ಶೃಂಗಾರಮಂಜರಿ. ಅನಂತನ ಕಾಮಸುಧೆ. ಮೀನನಾಥನ ಸ್ಮರದೀಪಿಕೆ. ಚಿತ್ರಧರನ ಶೃಂಗಾರಸಾರ.

 ಕಾಮಶಾಸ್ತ್ರದಲ್ಲಿ ಬರುವ ಶೃಂಗಾರ ನಾಯಕಿಯರ ಹಾಗು ನಾಯಕರ ವಿಭಾಗ ಕ್ರಮಗಳು ಕಾವ್ಯಶಾಸ್ತ್ರದವರಿಗೂ ಕವಿಗಳಿಗೂ ಸಂಸ್ಕøತದಲ್ಲಿ ಮಾರ್ಗದರ್ಶಕವಾದವು; ಅಷ್ಟೇ ಅಲ್ಲ, ಸ್ವಲ್ಪವೂ ಮಾರ್ಪಾಟಿಲ್ಲದೆ ಸ್ವೀಕೃತವೂ ಆದುವು. ನಾಯಕರನ್ನು ಪತಿ ಉಪಪತಿ, ವೈಶಿಕ, ಎಂದು ಸ್ಥೂಲವಾಗಿವಿಭಾಗಿಸಿ, ಪತಿಯನ್ನು ಅನುಕೂಲ, ದಕ್ಷಿಣ, ದೃಷ್ಟ, ಶಠ ಎಂಬ ನಾಲ್ಕು ಪ್ರಕಾರಗಳಾಗಿ ವಿಂಗಡಿಸಿ ಅವನಿಗೆ ಸಂಗಡಿಗರೆಂದು ಪೀಠಮರ್ದ, ವಿಟ, ಚೇಟ, ವಿದೂಷಕರನ್ನು ಹೇಳುವ ಮತ್ತು ಅಭಿಲಾಷೆ, ಚಿಂತೆ, ಸ್ಮøತಿ, ಗುಣಗಾನ, ಉದ್ವೇಗ, ಪ್ರಲಾಪ, ಉನ್ಮಾದ, ವ್ಯಾಧಿ, ಜಡತ್ವ, ಮರಣ ಎಂಬ ಶೃಂಗಾರರಸದ ದಶಾವಸ್ಥೆಗಳನ್ನು ವರ್ಣಿಸುವ ಪ್ರಕ್ರಿಯೆ ಅಲಂಕಾರ ಶಾಸ್ತ್ರಗಳಲ್ಲಿ ಸರ್ವಮಾನ್ಯವಾಗಿದೆ. ಇದರಂತೆ ಶೃಂಗಾರ ನಾಯಕಿಯರನ್ನು ಕೂಡ ಸ್ವೀಯೆ, ಪರಕೀಯೆ ಸಾಮಾನ್ಯೆ ಎಂದು ಸ್ಥೂಲವಾಗಿ ಮೂರಾಗಿ ವಿಭಾಗಿಸಿ, ಸ್ವೀಯೆಯನ್ನು ಮುಗ್ಧೆ, ಮಧ್ಯೆ, ಪ್ರಗಲ್ಭೆಯರೆಂದೂ ಮತ್ತೆ ವಿಂಗಡಿಸಿ ಮಧ್ಯೆ ಪ್ರಗಲ್ಭೆಯರನ್ನು ಧೀರೆ, ಅಧೀರೆ, ಧೀರಾಧೀರೆಯೆರೆಂದೂ ಹಾಗೆಯೇ ಶೃಂಗಾರಾವಸ್ಥೆಗಳನ್ನು ಗಮನಿಸಿ ಪ್ರೋಷಿತರ್ಭೃಕೆ, ಖಂಡಿತೆ, ಉತ್ಕಂಠಿತೆ, ಕಲಹಾಂತರಿತೆ, ವಿಪ್ರಲಬ್ಧೆ, ವಾಸಕಸಜ್ಜೆ, ಸ್ವಾಧೀನಪತಿಕೆ, ಅಭಿಸಾರಿಕೆ-ಎಂದು ಎಂಟು ರೀತಿಯಾಗಿಯೂ ವರ್ಣಿಸುವ ಪರಿಪಾಠವನ್ನು ಸಂಸ್ಕøತ ಸಾಹಿತ್ಯದ ಪರಿಷ್ಕøತಯುಗದ ಮಹಾಕವಿಗಳೆಲ್ಲಾ ತದ್ವತ್ತಾಗಿ ಪಾಲಿಸಿದ್ದಾರೆ. ಈ ದೃಷ್ಠಿಯಿಂದ ರುದ್ರಭಟ್ಟನ ಶೃಂಗಾರತಿಲಕ ಮುಂತಾದ ಗ್ರಂಥಗಳು ಇತ್ತ ಕಾವ್ಯಶಾಸ್ತ್ರದ ಗ್ರಂಥವೆನಿಸುವಂತೆ ಅತ್ತ ಕಾಮಶಾಸ್ತ್ರದ ಗ್ರಂಥಗಳೆಂದರೂ ಸಲ್ಲುತ್ತದೆ. ಶೃಂಗಾರಾಷ್ಟಕ, ಶೃಂಗಾರಶತಕಗಳು(ಮಯೂರ, ಭತೃಹರಿ, ಅಮರುಕ ಮುಂತಾದವರಿಂದ ರಚಿತ) ಕಾಮಶಾಸ್ತ್ರದಿಂದ ಪ್ರಭಾವಿತವಾದ ಕಾವ್ಯರೂಪಗಳೇ ಸರಿ.

 ಇದರಂತೆಯೇ ಕಾಮಶಾಸ್ತ್ರದ ಸ್ತ್ರೀ ಜಾತಿ ನಿರೂಪಣೆ (ಪದ್ಮಿನಿ, ಶಂಖಿನಿ, ಹಸ್ತಿನಿ) ಕಾವ್ಯಕಾರರಿಗೂ ಅಂಗೀಕಾರ ಯೋಗ್ಯವೆನಿಸಿದೆ. ತಿಥಿ ನಕ್ಷತ್ರಗಳಿಗನುಸಾರವಾಗಿ ಸ್ತ್ರೀ ಶರೀರದ ಅಂಗಾಂಗದಲ್ಲಿ ಬದಲಾಯಿಸಿ ನಿಲ್ಲುವ ಕಾಮಕಲೆಯ ಅಭಿಜ್ಞತೆಯೂ ರಸಿಕನಿಗೆ ಇರಬೇಕೆಂದು ಅದರ ವಿವರಗಳನ್ನು ಶಾಸ್ತ್ರೀಯವಾಗಿ ನಿರೂಪಿಸುತ್ತದೆ ಕಾಮಶಾಸ್ತ್ರ. ಕಾಮಶಾಸ್ತ್ರಕ್ಕೆ ಮನ್ಮಥನೇ ಅಧಿದೇವತೆ. ರತಿಯೇ ದೇವಿ. ಅವರ ಸ್ತೋತ್ರಗಳಿಂದಲೇ ಗ್ರಂಥಗಳೆಲ್ಲಾ ಆರಂಭವಾಗುತ್ತವೆ. ಸ್ತ್ರೀಯ ಭಾವಗ್ರಹಣ, ಯೋನಿದ್ರಾವಣ, ವಾಜೀಕರಣ, ಮುಂತಾದ ರಹಸ್ಯ ಪ್ರಕ್ರಿಯೆಯೆಲ್ಲ ಇಂದಿನ ಲೈಂಗಿಕ ಶಾಸ್ತ್ರದ ಆಧುನಿಕ ವಿಚಾರಸರಣಿಯಿಂದ ನೋಡಿದರೂ ಎಷ್ಟೋ ತಥ್ಯಪೂರ್ಣವಾಗಿರುವುದು ಇಲ್ಲಿ ವೇದ್ಯವಾಗುತ್ತದೆ. ಸುರತಕ್ರಿಯೆಯ ಅಂತರಂಗ ಬಹಿರಂಗಗಳನ್ನೆಲ್ಲ ಶಾಸ್ತ್ರ ವಿಜ್ಞಾನಿಯ ವಾಸ್ತವಿಕ ದೃಷ್ಟಿಯಿಂದ ನೋಡಿರುವುದು ಪ್ರಾಚೀನ ಭಾರತದ ಕಾಮಶಾಸ್ತ್ರದ ವೈಶಿಷ್ಟ್ಯವಾಗಿದೆ. ಕಾಮಶಾಸ್ತ್ರದ ಅಧ್ಯಯನದಿಂದ ಹೀಗೆ ವಾಸ್ತವಿಕ ಜೀವನಾನುಕೂಲ ರಹಸ್ಯಗಳ ಅರಿವಾಗುವುದಲ್ಲದೆ ಪ್ರಾಚೀನ ಕಾವ್ಯನಾಟಕಗಳ ಸ್ವಾರಸ್ಯಗ್ರಹಣೆಗೂ ಹೆಚ್ಚಿನ ಸಾಮಥ್ರ್ಯವುಂಟಾಗುತ್ತದೆ.

 ಕನ್ನಡದಲ್ಲಿ ಕಾಮಶಾಸ್ತ್ರ: ಕನ್ನಡದಲ್ಲಿ ಕಾಮಶಾಸ್ತ್ರವೂ ಸಂಸ್ಕøತ ಗ್ರಂಥಗಳ ಸಾರಸಂಗ್ರಹರೂಪವಾಗಿ ಅತ್ಯಂತ ಪ್ರಾಚೀನ ಕಾಲದಿಂದಲೇ ಬೆಳೆದು ಬಂದಿದೆ. ಗಂಗ ವಂಶದ ದೊರೆಗಳಲ್ಲಿ ಒಬ್ಬನಾದ ಮಾಧವ ನಾಲ್ಕನೆಯ ಶತಮಾನದಲ್ಲಿಯೇ ದತ್ತಕ ಸೂತ್ರಕ್ಕೆ ವೃತ್ತಿಯನ್ನು ಬರೆದಿದ್ದನೆಂದು ಆತನ ತಾಮ್ರಶಾಸನಗಳು ಹೇಳುತ್ತವೆ.

 ಇದಾದ ಮೇಲೆ ಸಂಸ್ಕøತ ಕವಿಪರಂಪರೆಯನ್ನನುಸರಿಸಿ ಕಾವ್ಯರಚನೆ ಮಾಡಿದ ಪಂಪ, ಪೊನ್ನ ಮುಂತಾದ ಚಂಪೂಕವಿಗಳೆಲ್ಲ ಪ್ರಾಯಿಕವಾಗಿ ಕಾಮಶಾಸ್ತ್ರದ ಪರಿಚಯವನ್ನು ವ್ಯಕ್ತಮಾಡಿದರೂ ಸ್ವತಂತ್ರ ಗ್ರಂಥರಚನೆಯನ್ನು ಮೊದಲಿಗೆ ಮಾಡಿದ ಕೀರ್ತಿ ಕವಿಚಕ್ರವರ್ತಿ ಜನ್ನನಿಗೆ ಸೇರುತ್ತದೆ. ಅವನ ಅಭಿನವಮುಕುರ ಮೋಟಗಾನ ಹಳ್ಳಿ ಸುಬ್ರಹ್ಮಣ್ಯಶಾಸ್ತ್ರಿಗಳಿಂದ ಸಂಪಾದಿಸಲ್ಪಟ್ಟು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಮುದ್ರಿತವಾಗಿದೆ. ಗ್ರ್ರಂಥ ಸಣ್ಣದಾದರೂ ಮುಖ್ಯ ವಿವರಗಳನ್ನೆಲ್ಲ ಸಂಗ್ರಹಿಸುವುದಲ್ಲಿದು ಯಶಸ್ವಿಯಾಗಿದೆ.

11ನೆಯ ಶತಮಾನದಲ್ಲಿ ಕಲ್ಯಾಣ ಚಾಳುಕ್ಯ ವಂಶಾವಳಿಯಲ್ಲಿ ಮಹಾರಾಜನಾಗಿದ್ದ ಜಯಸಿಂಹದೇವನ ಮಾಂಡಳಿಕ ರೇಚನೃಪನ ಆಶ್ರಯದಲ್ಲಿ ಚಂದ್ರರಾಜನೆಂಬ ಕವಿ ಬರೆದ ಮದನತಿಲಕವೆಂಬ ಕಾಮಶಾಸ್ತ್ರ ಗ್ರ್ರಂಥ 1953ರಲ್ಲಿ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯಿಂದ ಪ್ರಕಟವಾಗಿದೆ. ಇದು ಮನೋಹರವಾದ ಕಂದವೃತ್ತಗಳಿಂದ ಕೂಡಿದ್ದು, ವಿವಿಧ ಛಂದೋವಿಲಾಸಗಳಿಂದ ಮನೋರಂಜಕವಾಗಿದುವುದಲ್ಲದೆ ಹನ್ನೊಂದು ಅಧ್ಯಾಯಗಳಲ್ಲಿ ವಿಪುಲ ವಿಷಯಗಳನ್ನೂ ತಿಳಿಸುತ್ತದೆ. ಇದರ ಪೀಠಿಕೆಯಲ್ಲಿ ವಾತ್ಸ್ಯಾಯನ ಹೇಳಿರುವ ಅಂಶಗಳೆಲ್ಲ ಅನುವಾದಗೊಂಡಿವೆ. ಆಗಮ ಲೌಕಿಕ ವಿರೋಧಮಂ ಕಳೆದು, ಸಾರಾಂಶಮಂ ಕೊಂಡು ಪಲವು ಮತಂಗಳನೊಂದು ಮಾಡಿ ಪದಿನೆಂಧಿಕರಣಗಳಿಂದಳಂಕಾರಂ ಕೃತಮಾಗೆ ನಾನಾಛಂದದಿನೈನೂರು ಗದ್ಯಪದ್ಯಂಗಳಿಂ ವಿಶ್ರುತಂ ಮಾಡಿರುವುದಾಗಿ ಚಂದ್ರರಾಜ ತನ್ನ ಕೃತಿಯ ಮೊದಲಲ್ಲಿ ಹೇಳಿದ್ದಾನೆ. ಪದ್ಮಿನಿ ಇತ್ಯಾದಿ ಸ್ತ್ರೀಜಾತಿ ಲಕ್ಷಣ ; ದೇವ, ಯಕ್ಷ, ರಾಕ್ಷಸ, ಪಿಶಾಚಾದಿ ಅಂಶವುಳ್ಳ ಸ್ತ್ರೀಯರ ವಿಭಾಗ ; ದೇಶ ವಿದೇಶಗಳ ಸ್ತ್ರೀಲಕ್ಷಣ ; ತ್ರಿದೋಷ ಪ್ರಕೃತಿ ವರ್ಣನೆ ; ಉತ್ತಮ, ಮಧ್ಯಮ, ಕನಿಷ್ಠನಾರಿಯರ ವಿಚಾರ ; ಬಾಲೆ, ಯೌವನೆ, ಪ್ರೌಢೆ, ಲೌಲ್ಯೆ ಮೊದಲಾದವರ ಅನುಭವವರ್ಣನೆ ; ಪಣ್ಯಾಂಗನಾವರ್ಣನೆ ; ಕುಲಸ್ತ್ರೀ ವರ್ಣನೆ ; ವೇಶ್ಯಾವರ್ಣನೆ ; ರತಿಭಾವಲಕ್ಷಣ-ಎಂಬ ಹೆಸರಿನ ಹನ್ನೊಂದೇ ಅಧ್ಯಾಯಗಳು ಸಿಕ್ಕಿವೆ. ಮಿಕ್ಕಭಾಗ ದೊರೆತಿಲ್ಲ.

ಕಾಮಶಾಸ್ತ್ರದ ಸೂಕ್ಷ್ಮ ಪ್ರಕ್ರಿಯವರ್ಣನೆ ನೇಮಿಚಂದ್ರನ ಲೀಲಾವತಿಯಲ್ಲಿ ಬೇಕಾದಷ್ಟು ಬಂದರೂ ಆತ ಸ್ವತಂತ್ರ ಕಾಮಶಾಸ್ತ್ರ ಗ್ರಂಥ ಬರೆದಂತಿಲ್ಲ. ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವದಲ್ಲಿಯಂತೂ ಪ್ರತ್ಯೇಕ ಅಧ್ಯಾಯದಲ್ಲಿ ವೈಶಿಕವೃತ್ತಾಂತ ವರ್ಣಿತವಾಗಿದೆ.

ಆದರೆ ಅಚ್ಚಾಗದಿರುವ ಎಷ್ಟೋ ಕಾಮಶಾಸ್ತ್ರ ಗ್ರಂಥಗಳು ಇನ್ನೂ ತಾಳೆಯೋಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಯನ ಸಂಸ್ಥೆ ಮುಂತಾದ ಪ್ರಾಚೀನ ಪುಸ್ತಕ ಭಂಡಾರಗಳಲ್ಲಿ ಅಡಗಿಕೊಂಡಿವೆ. ಇವೆಲ್ಲ ಪ್ರಾಯಿಕವಾಗಿ ಶರ, ಭಾಮಿನಿ, ವಾರ್ಧಕ ಷಟ್ಪದಿಗಳಲ್ಲಿ ರಚಿತವಾದವು. ಕೆಲವು ವಾತ್ಸ್ಯಾಯನನ ಕಾಮಸೂತ್ರಕ್ಕೆ ಟೀಕೆಗಳು. ಛಂದೋಬದ್ಧವಾದ ಕೃತಿಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸಬಹುದು.

1 ಕೊಕ್ಕೋಕ ಶಾಸ್ತ್ರ : ಇದರಲ್ಲಿ ಏಳು ಸಂಧಿಗಳು ; ಪದ್ಯ 92. ಕವಿಯ ಹೆಸರು ತಿಳಿಯದು ; ಛಂದಸ್ಸು ಷಟ್ಪದಿ. ಉದಾಹರಣೆ:

ನಲ್ಲಳಿನು ಕೇಳು ಬಿದಿಗೆ

ಯಲ್ಲಿ ಪಂಚಮಿಯಲ್ಲಿ ಚೌತಿ

ಯಲ್ಲಿ ಷಷ್ಠಿಯಲ್ಲಿ ಅಷ್ಟಮಿಯಲ್ಲಿ

ದ್ವಾದಶಿಯಲ್ಲಿ ದಶಮಿಯಲ್ಲಿ ಪಿರಿದು

ಪಲ್ಲವಿಪುದು ಕಾಮಕೇಳಿ

ಸಲ್ಲಲಿತಾಂಗಿಯೆನಿಪ್ಪ ಪದ್ಮಿನಿಗೆ ನಿರಂತರಂ ||

ಅಲಘು ಜಘನದ ತೋರ

ಮೊಲೆಯ ಮೆಲ್ನುಡಿಯ ಸಮ

ವೆಲೆಯ ಹಂಸಸ್ವರದ ಹಂಸಗತಿಯ

ನೆಲೆಯುಬ್ಬಿ ಬಡವಾಗಿ

ಕೆಲವು ರೋಮವನಾಂತು

ಸಲೆಯೊಸರುತಿರ್ಪ ಕಂದರ್ಪಗೃಹದ...

2 ಕಾಮಶಾಸ್ತ್ರ : ಕರ್ತೃ ತಿಳಿಯದು. ಮಯೂರಪದದ ವರ್ಣನೆ; ಗದ್ಯದಲ್ಲಿದೆ. 

ಎಡದ ಕೈಯುಗರ ಸಣ್ಣಮೊನೆಮಾಡಿ ಹೆಬ್ಬೆರಳಂ ತನ್ನೊಂದೊಂದ ಮುಟ್ಟಿಸಿ ಮೊಲೆಯ ಮೇಲಿಕ್ಕಿ ಮೊಲೆಯ ಮೊದಲಿಂ ಮೊಲೆಯ ಮೂಗು ಪರಿಯಂತ ಮೊಲೆಯಂಬರಂ ತೆಗೆವುದು ನವಿಲಡಿಯಾಕಾರಮಪ್ಪುದರಿಂ ಮಯೂರ ಪದವೆಂಬ ಪೆಸರಾಯಿತು.

ವೇಷ್ಟಿತವೆಂಬ ಸುರತಬಂಧ ಹೇಗೆಂದರೆ :

 ಸ್ತ್ರೀ ಮೆಲ್ಲನೆ ಮಲಗಿದವಳು ತನ್ನೆರಡು ತೊಡೆಗಳ ಎಡೆಯನಗಲಿಸುತ್ತಾ ಕೂಡಾಲೊತ್ತೊತ್ತುತಿರ್ದೊಡೆ ರಮಿಸುವುದು. ಅಲ್ಲಿ ಹಿಂದಣ ಕರಣಮೆನೆ ಒಂದೊಂದು ತೊಡೆಗಳನೊಂದೊಂದು ಕೈಗಳಿಂ ಪಲ್ಲಟದಿಂದೊತ್ತಿ ರಮಿಸಲ್ಕೆ ವೇಷ್ಟಿತಮೆಂಬ ಕರಣಂ.

3 ಜನವಶ್ಯ : ಇದನ್ನು ಬರೆದ ಕವಿ ಕಲ್ಲರಸ. ಇದೂ ಷಟ್ಪದಿಯಲ್ಲಿದೆ. ಒಟ್ಟು ಒಂಬತ್ತು ಸಂಧಿಗಳಿಗೆ. ಉದಾಹರಣೆ-ಮಂದವೇಗನ ಲಕ್ಷಣ :

ಉಗುರು ಪಲ್ಲ ಕಳೆಗಳೇಳೆ

ಬಿಗಿದು ಮೊಲೆಯೆಡೆಯೊಳು ತೋಳ

ಮೊಗದೊಳೆಸಗಿ ಲಲ್ಲೆಗರೆದು ಪೊಯ್ದು ಮುದ್ದಿಸಿ

ಬಗೆಗೆ ತಂದು ಸತಿಯನಿಚ್ಚೆ

ಯೊಗೆಯೆ ನೆರೆವನವನೆ ಕೇಳ

ಬಗಸೆಗಣ್ಣ ಪೆಣ್ಣೆ ಮಂದವೇಗನೆಂಬನು.

ಈ ಮೇಲಿನ ಉದಾಹರಣೆಗಳು ಸೂಚಿಸುವಂತೆ ಸಾಮಾನ್ಯವಾಗಿ ಕನ್ನಡ ಕಾಮಶಾಸ್ತ್ರದ ಗ್ರಂಥಗಳೆಲ್ಲ ಪತಿ ಪತ್ನಿಗೆ ಸಂಬೋಧಿಸಿ ಹೇಳಿದಂತೆ ಸಂವಾದ ಶೈಲಿಯಲ್ಲಿ ರಚಿತವಾಗಿವೆ. ಕೊಕ್ಕೋಕನ ಗ್ರ್ರಂಥವೇ ಇವರಿಗೆಲ್ಲ ಪ್ರೇರಣೆಯಿತ್ತಂತೆ ಕಾಣುತ್ತದೆ. ವಿಷಯವೆಲ್ಲ ಸಂಸ್ಕøತ ಶಾಸ್ತ್ರದಿಂದ ಬಂದುದೇ ಆದರೂ ಹೇಳುವ ಶೈಲಿಯಲ್ಲಿ ಲಾಲಿತ್ಯ ಗಾಂಭಿರ್ಯಗಳು ಕಾಣುತ್ತವೆ. ಇವುಗಳಲ್ಲದೆ. ಗದ್ಯದಲ್ಲಿರುವ ರತಿರಹಸ್ಯ ಟೀಕು, ಅಂಗಜಬೋಧೆ, ವಾತ್ಸ್ಯಾಯನಸೂತ್ರ ಮುಂತಾದ ಗ್ರಂಥಗಳ ಹಸ್ತಪ್ರತಿಗಳೂ ಉಂಟು. ಇವು ಪ್ರಕಟಗೊಂಡರೆ ಈ ಶಾಸ್ತ್ರಭಾಗದಲ್ಲಿ ಕನ್ನಡದ ಕಾಣಿಕೆಯೇನೆಂದು ತಿಳಿಯುವಂತಾಗುತ್ತದೆ.      

 (ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ